ಅಂತರ್-ಧರ್ಮೀಯ ವಿವಾಹವಾಗಿದ್ದ 8 ತಿಂಗಳ ಗರ್ಭಿಣಿ ಸಹೋದರಿಯನ್ನು 'ಮರ್ಯಾದೆ'ಯ ಹೆಸರಿನಲ್ಲಿ ಬರ್ಬರವಾಗಿ ಜೀವಂತವಾಗಿ ಸುಟ್ಟು ಕೊಂದಿದ್ದ ಇಬ್ಬರು ಸಹೋದರರಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠವು ಖಚಿತಪಡಿಸಿದೆ. ಈ ಪ್ರಕರಣವನ್ನು "ಅತ್ಯಂತ ವಿರಳಾತಿವಿರಳ" ಎಂದು ಪರಿಗಣಿಸಿರುವ ನ್ಯಾಯಾಲಯ, ಆರೋಪಿಗಳ ಕೃತ್ಯವನ್ನು "ಕ್ರೂರ, ಅಮಾನವೀಯ ಮತ್ತು ಪೈಶಾಚಿಕ" ಎಂದು ಬಣ್ಣಿಸಿದ್ದು, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮೃತರ ತಾಯಿ, ಮೂವರು ಸಹೋದರಿಯರು ಹಾಗೂ ಓರ್ವ ಭಾವನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನೂ ನ್ಯಾಯಾಲಯ ಖಾಯಂಗೊಳಿಸಿದೆ.
ಪ್ರಕರಣದ ಹಿನ್ನೆಲೆ :
ವಿಜಯಪುರ ಜಿಲ್ಲೆಯ ಗುಂಡಕನಾಳ ಗ್ರಾಮದ ನಿವಾಸಿ, ದಲಿತ ಸಮುದಾಯದ ಸಾಯಿಬಣ್ಣ ಅವರನ್ನು ಮುಸ್ಲಿಂ ಸಮುದಾಯದ ಭಾನು ಬೇಗಂ ಪ್ರೀತಿಸುತ್ತಿದ್ದರು. ಕುಟುಂಬದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇಬ್ಬರೂ ಊರು ಬಿಟ್ಟು ಗೋವಾಕ್ಕೆ ತೆರಳಿ ವಿವಾಹವಾಗಿದ್ದರು. ಭಾನು ಗರ್ಭಿಣಿಯಾದ ಬಳಿಕ, ದಂಪತಿ ತಮ್ಮ ಗ್ರಾಮಕ್ಕೆ ಮರಳಿದ್ದರು. 2017ರ ಜೂನ್ 3 ರಂದು ಮಧ್ಯಾಹ್ನ ಸುಮಾರು 3:30ಕ್ಕೆ, ಭಾನು ಅವರ ಸಹೋದರರಾದ ಇಬ್ರಾಹಿಂಸಾಬ್ (ಆರೋಪಿ-1) ಮತ್ತು ಅಕ್ಬರ್ (ಆರೋಪಿ-2), ತಾಯಿ ರಾಂಜಾನ್ಬಿ (ಆರೋಪಿ-4) ಹಾಗೂ ಇತರ ಕುಟುಂಬಸ್ಥರು ಮಾರಕಾಸ್ತ್ರಗಳೊಂದಿಗೆ ಬಂದು ದಂಪತಿ ವಾಸವಿದ್ದ ಮನೆಗೆ ಬೆಂಕಿ ಹಚ್ಚಿದರು.
ಬಳಿಕ, 8 ತಿಂಗಳ ಗರ್ಭಿಣಿಯಾಗಿದ್ದ ಭಾನು ಅವರನ್ನು ಮನೆಯಿಂದ ಹೊರಗೆಳೆದು, ಮನಬಂದಂತೆ ಥಳಿಸಿದ್ದಾರೆ. ಆರೋಪಿ ಇಬ್ರಾಹಿಂಸಾಬ್ ಸೀಮೆಎಣ್ಣೆ ಸುರಿದರೆ, ಮತ್ತೊಬ್ಬ ಸಹೋದರ ಅಕ್ಬರ್ ಬೆಂಕಿ ಹಚ್ಚಿ ಆಕೆಯನ್ನು ಜೀವಂತವಾಗಿ ದಹಿಸಿದ್ದರು. ಈ ವೇಳೆ ಪತ್ನಿಯನ್ನು ರಕ್ಷಿಸಲು ಯತ್ನಿಸಿದ ಪತಿ ಸಾಯಿಬಣ್ಣ ಅವರ ಮೇಲೂ ಕಲ್ಲಿನಿಂದ ಮತ್ತು ಕೊಡಲಿಯ ಹಿಡಿಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಘೋರ ಕೃತ್ಯದ ಕುರಿತು ತಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಾದ-ಪ್ರತಿವಾದಗಳು :
ವಿಚಾರಣೆ ನಡೆಸಿದ್ದ ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪ್ರಕರಣವನ್ನು "ಅತ್ಯಂತ ವಿರಳಾತಿವಿರಳ" ಎಂದು ಪರಿಗಣಿಸಿ, ಸಹೋದರರಾದ ಇಬ್ರಾಹಿಂಸಾಬ್ ಮತ್ತು ಅಕ್ಬರ್ಗೆ ಮರಣದಂಡನೆ ಹಾಗೂ ಇತರ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಆರೋಪಿಗಳ ಪರ ವಕೀಲರು, "ಪ್ರಾಸಿಕ್ಯೂಷನ್ ಕೇವಲ ಮೃತರ ಪತಿಯ ಕುಟುಂಬದವರಾದ ಆಸಕ್ತ ಸಾಕ್ಷಿಗಳನ್ನು ಮಾತ್ರ ಅವಲಂಬಿಸಿದೆ. ಸ್ವತಂತ್ರ ಸಾಕ್ಷಿಗಳು ಹಾಗೂ ಪಂಚ ಸಾಕ್ಷಿಗಳು ಸಹ ಪ್ರಾಸಿಕ್ಯೂಷನ್ ಕಥೆಯನ್ನು ಬೆಂಬಲಿಸಿಲ್ಲ. ಮೃತರ ಮತ್ತೊಬ್ಬ ಸಹೋದರಿ ಕೂಡ ದಲಿತ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದು, ಅವರನ್ನು ಒಪ್ಪಿಕೊಂಡಿರುವ ಕುಟುಂಬಕ್ಕೆ ಈ ಕೃತ್ಯ ಎಸಗುವ ಉದ್ದೇಶವಿರಲಿಲ್ಲ," ಎಂದು ವಾದಿಸಿದ್ದರು.
ಸರ್ಕಾರದ ಪರ ವಕೀಲರು, "ಮೃತಳ ಪತಿ ಸ್ವತಃ ಗಾಯಾಳು ಮತ್ತು ಪ್ರತ್ಯಕ್ಷದರ್ಶಿ. ಅವರ ಸಾಕ್ಷ್ಯವು ವೈದ್ಯಕೀಯ ವರದಿಗಳಿಂದ ಸಂಪೂರ್ಣವಾಗಿ ದೃಢಪಟ್ಟಿದೆ. ಇದು ಮರ್ಯಾದೆಯ ಹೆಸರಿನಲ್ಲಿ ನಡೆದ ಪೂರ್ವನಿಯೋಜಿತ, ಘೋರ ಹತ್ಯೆ. ಗರ್ಭಿಣಿ ಎಂದು ಕೂಡ ನೋಡದೆ, ಗರ್ಭದಲ್ಲಿದ್ದ ಶಿಶುವನ್ನೂ ಹತ್ಯೆ ಮಾಡಲಾಗಿದೆ. ಈ ಕೃತ್ಯ ಸಮಾಜದ ಆತ್ಮಸಾಕ್ಷಿಯನ್ನೇ ನಡುಗಿಸಿದೆ. ಹಾಗಾಗಿ, ಮರಣದಂಡನೆಯೇ ಸರಿಯಾದ ಶಿಕ್ಷೆ," ಎಂದು ಬಲವಾಗಿ ಪ್ರತಿಪಾದಿಸಿದರು.
ಹೈಕೋರ್ಟ್ ತೀರ್ಪು :
ಮೇಲ್ಮನವಿ ಮತ್ತು ಮರಣದಂಡನೆ ದೃಢೀಕರಣ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
ಪೀಠವು ತನ್ನ ತೀರ್ಪಿನಲ್ಲಿ ಹೀಗೆ ಹೇಳಿದೆ:
1. ಸಾಕ್ಷ್ಯಗಳ ವಿಶ್ಲೇಷಣೆ: "ಗಾಯಗೊಂಡ ಪ್ರತ್ಯಕ್ಷದರ್ಶಿ (ಪತಿ, ಪಿಡಬ್ಲ್ಯೂ-3)ಯ ಸಾಕ್ಷ್ಯವು ಅತ್ಯಂತ ಮಹತ್ವದ್ದಾಗಿದೆ. ಆಸಕ್ತ ಸಾಕ್ಷಿಗಳೆಂದು ಅವರ ಹೇಳಿಕೆಯನ್ನು ತಳ್ಳಿಹಾಕಲಾಗದು. ಅವರ ಸಾಕ್ಷ್ಯವು ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳೊಂದಿಗೆ ಸ್ಥಿರವಾಗಿದೆ."
2. ಅಪರಾಧದ ಸ್ವರೂಪ: "ಇದು ಕೇವಲ ಕೊಲೆಯಲ್ಲ, ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ಮರ್ಯಾದೆಗೇಡು ಹತ್ಯೆ. ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಉದ್ದೇಶದಿಂದ ಹಗಲು ಹೊತ್ತಿನಲ್ಲೇ ಈ ಪೈಶಾಚಿಕ ಕೃತ್ಯ ಎಸಗಲಾಗಿದೆ. ಆರೋಪಿಗಳು ತಮ್ಮದೇ ರಕ್ತಸಂಬಂಧಿ, ಗರ್ಭಿಣಿ ಎಂದು ಕೂಡ ಕರುಣೆ ತೋರಿಲ್ಲ."
3. ಮರಣದಂಡನೆ ಸಮರ್ಥನೆ: "ಈ ಪ್ರಕರಣದಲ್ಲಿ ತಗ್ಗಿಸುವ ಅಂಶಗಳಿಗಿಂತ ಉಲ್ಬಣಗೊಳಿಸುವ ಅಂಶಗಳೇ ಹೆಚ್ಚಾಗಿವೆ. ಆರೋಪಿಗಳ ವಯಸ್ಸು ಚಿಕ್ಕದು ಎಂಬ ವಾದವನ್ನು ಒಪ್ಪಲಾಗದು, ಏಕೆಂದರೆ ಅಪರಾಧದ ಕ್ರೌರ್ಯದ ಮುಂದೆ ವಯಸ್ಸು ಗೌಣವಾಗುತ್ತದೆ. ಆರೋಪಿಗಳು ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆದ್ದರಿಂದ, ಈ ಪ್ರಕರಣವು 'ಬಚ್ಚನ್ ಸಿಂಗ್' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿವರಿಸಿದ 'ವಿರಳಾತಿವಿರಳ' ವರ್ಗಕ್ಕೆ ಸೇರುತ್ತದೆ."
ಈ ಹಿನ್ನೆಲೆಯಲ್ಲಿ, ನ್ಯಾಯಾಲಯವು ಇಬ್ಬರು ಸಹೋದರರ ಗಲ್ಲು ಶಿಕ್ಷೆಯನ್ನು ಖಚಿತಪಡಿಸಿ, ಉಳಿದ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು, ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿತು.
ಪ್ರಕರಣದ ಹೆಸರು: ರಾಂಜಾನ್ಬಿ ಮತ್ತು ಇತರರು vs ಕರ್ನಾಟಕ ರಾಜ್ಯ
ಪ್ರಕರಣದ ಸಂಖ್ಯೆ: ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 200176/2024, 200116/2025 ಮತ್ತು ಕ್ರಿಮಿನಲ್ ರೆಫರೆನ್ಸ್ ಪ್ರಕರಣ ಸಂಖ್ಯೆ 200001/2024
ನ್ಯಾಯಾಲಯ: ಕರ್ನಾಟಕ ಉಚ್ಚ ನ್ಯಾಯಾಲಯ, ಕಲಬುರಗಿ ಪೀಠ
ನ್ಯಾಯಪೀಠ: ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್
ತೀರ್ಪಿನ ದಿನಾಂಕ: ಸೆಪ್ಟೆಂಬರ್ 25, 2025