ಭಾರತದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆಯನ್ನು ಖಂಡಿಸಿ, ಬುಧವಾರ, ಅಕ್ಟೋಬರ್ 8, 2025 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಬೆಂಗಳೂರು ವಕೀಲರ ಸಂಘವು ಕರ್ನಾಟಕದ ಎಲ್ಲಾ ತಾಲೂಕು ವಕೀಲರ ಸಂಘಗಳಿಗೆ ಕರೆ ನೀಡಿದೆ. ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ನ ದ್ವಾರದ ಬಳಿ ಮಧ್ಯಾಹ್ನ 1:30 ಕ್ಕೆ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ, ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಂಗ ಕಲಾಪ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿರುವ ಈ ಘಟನೆ ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಈ ಪ್ರಯತ್ನವಾಗಿದೆ ಎಂದು ತೀವ್ರವಾಗಿ ಖಂಡಿಸಿರುವ ಬೆಂಗಳೂರು ವಕೀಲರ ಸಂಘ, ಈ ವಿಷಯದ ಕುರಿತು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲು ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬೆಂಗಳೂರು ವಕೀಲರ ಸಂಘವು ತನ್ನೆಲ್ಲಾ ಸದಸ್ಯರಲ್ಲಿ ಮನವಿ ಮಾಡಿದೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯು ಬುಧವಾರ ಮಧ್ಯಾಹ್ನ 1:30 ಕ್ಕೆ ಹೈಕೋರ್ಟ್ನ ಮುಖ್ಯ ದ್ವಾರದ ಬಳಿ ಜರುಗಲಿದೆ.
ಇದೇ ವೇಳೆ, ಕರ್ನಾಟಕದಾದ್ಯಂತ ಇರುವ ಎಲ್ಲಾ ತಾಲೂಕು ವಕೀಲರ ಸಂಘಗಳು ಕೂಡ ಬುಧವಾರ ಬೆಳಿಗ್ಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಿ, ಈ ಘಟನೆಯನ್ನು ಖಂಡಿಸಬೇಕು ಮತ್ತು ನ್ಯಾಯಾಂಗ ವ್ಯವಸ್ಥೆಯೊಂದಿಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾ ರೆಡ್ಡಿ ಮತ್ತು ಕಾರ್ಯದರ್ಶಿ ಶ್ರೀ ಪ್ರವೀಣ್ ಗೌಡ ಅವರು ವಿನಂತಿಸಿದ್ದಾರೆ.
ಈ ಪ್ರತಿಭಟನಾ ಕರೆಯನ್ನು ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಖಜಾಂಚಿ ಶ್ರೀಮತಿ ಶ್ವೇತಾ ರವಿಶಂಕರ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಗೌರವವನ್ನು ಎತ್ತಿಹಿಡಿಯುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಘವು ಸ್ಪಷ್ಟಪಡಿಸಿದೆ.