ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಅಹಿತಕರ ಘಟನೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (KSBC) ತೀವ್ರವಾಗಿ ಖಂಡಿಸಿದೆ. ದಿನಾಂಕ 06/10/2025 ರಂದು ನಡೆದ ಈ ಘಟನೆಯು ನ್ಯಾಯಾಂಗ ನಿಂದನೆಯಾಗಿದ್ದು, ವಕೀಲ ವೃತ್ತಿಯ ಘನತೆಗೆ ಕಳಂಕ ತಂದಿದೆ ಎಂದು ಪರಿಷತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಮಿಟ್ಟಲಕೋಡ ಎಸ್. ಎಸ್. ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, "ಸರ್ವೋಚ್ಚ ನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ. ಬಿ. ಆರ್. ಗವಾಯಿ ಅವರ ಮೇಲೆ, ವಕೀಲರಾದ ರಾಕೇಶ್ ಕಿಶೋರ್ ಅವರು ಸಭಾಂಗಣದಲ್ಲಿ ಶೂ ಎಸೆಯಲು ಯತ್ನಿಸಿದ ಪ್ರಕರಣವು ಮಾನ್ಯ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ಇಡೀ ನ್ಯಾಯಾಂಗ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದೆ" ಎಂದು ಹೇಳಿದ್ದಾರೆ.
ಸಮಾಜದಲ್ಲಿ ಇತರರಿಗೆ ಮಾದರಿಯಾಗಬೇಕಾದ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ವಿಶ್ವಾಸವನ್ನು ಉಳಿಸಬೇಕಾದ ವಕೀಲರೇ ಇಂತಹ ಕೃತ್ಯ ಎಸಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. "ವಕೀಲರಾದ ರಾಕೇಶ್ ಕಿಶೋರ್ ಅವರು ತೋರಿಸಿದ ಈ ರೀತಿಯ ಅಸಭ್ಯ, ಬೇಜವಾಬ್ದಾರಿ ಹಾಗೂ ಅಶಿಸ್ತಿನ ವರ್ತನೆ ವಕೀಲ ವೃತ್ತಿಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ತೀವ್ರ ಖಂಡನೆಗೆ ಪಾತ್ರವಾಗಿದೆ" ಎಂದು ಪರಿಷತ್ತು ಅಭಿಪ್ರಾಯಪಟ್ಟಿದೆ.
ಈ ಬೇಜವಾಬ್ದಾರಿ ವರ್ತನೆ ಹಾಗೂ ಕೃತ್ಯವನ್ನು ಪರಿಷತ್ತು ಬಲವಾಗಿ ಖಂಡಿಸುವುದರ ಜೊತೆಗೆ, ಸಂಬಂಧಪಟ್ಟ ವಕೀಲರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಮಾಡಿದೆ.