ಸಹಜ ವೈವಾಹಿಕ ಕಲಹ ಮತ್ತು ಕೋಪದ ಭರದಲ್ಲಿ ಆಡುವ ಮಾತುಗಳನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಪತ್ನಿ ಮತ್ತು ಆಕೆಯ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿ, ಅವರನ್ನು ದೋಷಮುಕ್ತಗೊಳಿಸಿದೆ. ಆತ್ಮಹತ್ಯೆಗೆ ಪ್ರಚೋದನೆಯ ಉದ್ದೇಶ ಇಲ್ಲದಿದ್ದರೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 306ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಸಮೀರ್ ಜೈನ್ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಪತಿಯ ಆತ್ಮಹತ್ಯೆಯ ನಂತರ, ಮೃತನ ತಂದೆ ತನ್ನ ಸೊಸೆ (ಅರ್ಜಿದಾರೆ) ಮತ್ತು ಆಕೆಯ ತಂದೆ-ತಾಯಿಯ ವಿರುದ್ಧ ದೂರು ದಾಖಲಿಸಿದ್ದರು. ಮದುವೆಯಾದಾಗಿನಿಂದ ಆರೋಪಿಗಳು ತನ್ನ ಮಗನಿಗೆ ಮಾನಸಿಕ ಹಿಂಸೆ ಮತ್ತು ಅವಮಾನ ಮಾಡುತ್ತಿದ್ದರು, ಇದರಿಂದಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು. ಈ ಹಿಂದೆ, ಮಹಿಳೆಯು ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯದ (ಸೆಕ್ಷನ್ 498-A) ಪ್ರಕರಣ ದಾಖಲಿಸಿದ್ದರು. ನಂತರ ಎರಡೂ ಕುಟುಂಬಗಳ ನಡುವೆ ಸಂಧಾನವಾಗಿತ್ತು. ಘಟನೆಯ ಕೆಲವು ದಿನಗಳ ಮೊದಲು, ಮಹಿಳೆಯ ಪೋಷಕರು ಮನೆಗೆ ಬಂದು ಮೃತನೊಂದಿಗೆ ಜಗಳವಾಡಿ "ಹೋಗಿ ಸಾಯಿ" ಎಂದು ಹೇಳಿದ್ದರು, ಇದಾದ ಕೆಲವೇ ದಿನಗಳಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ದೂರಲಾಗಿತ್ತು. ಈ ಎಫ್ಐಆರ್ ಆಧಾರದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ, ಆರೋಪಿಗಳು ತಮ್ಮನ್ನು ಪ್ರಕರಣದಿಂದ ಕೈಬಿಡಬೇಕೆಂದು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದ್ದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದಗಳು
ಅರ್ಜಿದಾರರ ಪರ ವಕೀಲರು, "ಇದು ಕೇವಲ ವೈವಾಹಿಕ ಭಿನ್ನಾಭಿಪ್ರಾಯದ ಪ್ರಕರಣ. ದೂರುದಾರರು ಮಾಡಿರುವ ಆರೋಪಗಳು ಸಾಮಾನ್ಯ ಸ್ವರೂಪದ್ದಾಗಿವೆ. ಆತ್ಮಹತ್ಯೆಗೆ ಪ್ರಚೋದಿಸುವ ಯಾವುದೇ ಉದ್ದೇಶ ಅಥವಾ ಕೃತ್ಯ ಅರ್ಜಿದಾರರಿಂದ ನಡೆದಿಲ್ಲ. ಕೋಪದಲ್ಲಿ ಆಡಿದ ಮಾತುಗಳನ್ನು ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ" ಎಂದು ವಾದಿಸಿದರು.
ಸರ್ಕಾರ ಮತ್ತು ದೂರುದಾರರ ಪರ ವಕೀಲರು, "ಆರೋಪಿಗಳು ನಿರಂತರವಾಗಿ ಮೃತರಿಗೆ ಹಿಂಸೆ ನೀಡುತ್ತಿದ್ದರು. ಘಟನೆಗೂ ಮುನ್ನ 'ಹೋಗಿ ಸಾಯಿ' ಎಂದು ನೇರವಾಗಿ ಪ್ರಚೋದಿಸಿದ್ದಾರೆ. ಹೀಗಾಗಿ, ಪ್ರಥಮ ದೃಷ್ಟಿಯಲ್ಲಿ ಆರೋಪ ಸಾಬೀತಾಗುವುದರಿಂದ ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿದೆ" ಎಂದು ಪ್ರತಿವಾದಿಸಿದರು.
ಹೈಕೋರ್ಟ್ ತೀರ್ಪು
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, ಸೆಕ್ಷನ್ 306ರ ಅಡಿಯಲ್ಲಿ ಅಪರಾಧವನ್ನು ಧೃಢಿಕರಿಸಲು, 'ಪ್ರಚೋದನೆ' ಮತ್ತು 'ದುರುದ್ದೇಶ' ಅತ್ಯಗತ್ಯ ಅಂಶಗಳಾಗಿವೆ ಎಂದು ವಿವರಿಸಿತು. ಸುಪ್ರೀಂ ಕೋರ್ಟ್ನ ಹಲವು ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ನ್ಯಾಯಾಲಯ, "ಸಮಾಜದಲ್ಲಿ ವೈವಾಹಿಕ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ಸಾಮಾನ್ಯ. ಆತ್ಮಹತ್ಯೆಯು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆರೋಪಿಯ ಕೃತ್ಯದಿಂದಾಗಿ, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರಬೇಕು," ಎಂದು ಅಭಿಪ್ರಾಯಪಟ್ಟಿತು.
ಜಗಳದ ಸಮಯದಲ್ಲಿ "ಹೋಗಿ ಸಾಯಿ" ಎಂದು ಹೇಳುವುದು, ಆ ಮಾತಿನ ಪರಿಣಾಮವನ್ನು ಉದ್ದೇಶಿಸದೆ ಆಡಿದ ಆ ಕ್ಷಣದ ಮಾತಾಗಿರುತ್ತದೆ. ಅದನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು 'ಸ್ವಾಮಿ ಪ್ರಹ್ಲಾದದಾಸ್ ವಿರುದ್ಧ ಮಧ್ಯಪ್ರದೇಶ ರಾಜ್ಯ' ಪ್ರಕರಣವನ್ನು ಉಲ್ಲೇಖಿಸಿ ನ್ಯಾಯಾಲಯ ಸ್ಪಷ್ಟಪಡಿಸಿತು. ಪ್ರಸ್ತುತ ಪ್ರಕರಣದಲ್ಲಿ, ಆರೋಪಿಗಳಿಗೆ ಮೃತನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯಾವುದೇ ಉದ್ದೇಶವಿರುವುದು ಸಾಬೀತಾಗಿಲ್ಲ. ಹೀಗಾಗಿ, ಅವರ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ಮುಂದುವರಿಸಲು ಯಾವುದೇ ಆಧಾರಗಳಿಲ್ಲ ಎಂದು ಹೇಳಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಮೂವರೂ ಆರೋಪಿಗಳನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿ ಆದೇಶಿಸಿತು.
ಪ್ರಕರಣದ ಹೆಸರು: ರಚನಾ ದೇವಿ ಮತ್ತು ಇತರರು vs ಉತ್ತರ ಪ್ರದೇಶ ರಾಜ್ಯ ಮತ್ತು ಇನ್ನೊಬ್ಬರು
ಪ್ರಕರಣದ ಸಂಖ್ಯೆ: ಕ್ರಿಮಿನಲ್ ರಿವಿಷನ್ ನಂ. 5794, 2023
ನ್ಯಾಯಾಲಯ: ಅಲಹಾಬಾದ್ ಹೈಕೋರ್ಟ್
ನ್ಯಾಯಪೀಠ: ನ್ಯಾಯಮೂರ್ತಿ ಸಮೀರ್ ಜೈನ್