ಹಾಸನ ಜಿಲ್ಲಾ ವಕೀಲರ ಸಂಘವು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ವಕೀಲರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.
ಈ ಶಿಬಿರವನ್ನು ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ರೋಟರಿ ಕ್ಲಬ್ ಹಾಸನ್ ಮಿಡ್ ಟೌನ್, ರೋಟರಿ ಕ್ಲಬ್ ಆಫ್ ಸನ್ ರೈಸ್, ವಿ ಕೇರ್ ಡೆಂಟಲ್ ಕ್ಲಿನಿಕ್ ಮತ್ತು ಸುನಂದ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣಿನ ದೃಷ್ಟಿ, ದಂತ ಸಮಸ್ಯೆ, ಮೂಳೆ ಮತ್ತು ಕೀಲು ರೋಗ ಹಾಗೂ ಸ್ತ್ರೀರೋಗ ಸಂಬಂಧಿ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಕಾರ್ಲೆ ಮೊಗಣ್ಣಗೌಡ ಅವರು, "ವಕೀಲರು ತಮ್ಮ ವೃತ್ತಿಯ ಒತ್ತಡದ ನಡುವೆ ಆರೋಗ್ಯದ ಬಗ್ಗೆಯೂ ಗಮನಹರಿಸುವುದು ಅತ್ಯಗತ್ಯ" ಎಂದು ಕಿವಿಮಾತು ಹೇಳಿದರು.
ನಂತರ, ಡಾ. ತೇಜಸ್ವಿ ಅವರು ಆರೋಗ್ಯ ಜಾಗೃತಿಯ ಕುರಿತು ಮಾತನಾಡಿ, "ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಮುಖ್ಯ. ಕಾಲಕಾಲಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭವನೀಯ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಬಹುದು. ಉತ್ತಮ ಆಹಾರ ಕ್ರಮ, ವ್ಯಾಯಾಮ ಹಾಗೂ ಯೋಗಾಸನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು" ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಚ್.ಆರ್. ಒಂಬೇಶ್, ಉಪಾಧ್ಯಕ್ಷ ಎಂ.ಟಿ. ತಿಮ್ಮೇಗೌಡ, ಜಂಟಿ ಕಾರ್ಯದರ್ಶಿ ಎ.ಜೆ. ರಘು, ಖಜಾಂಚಿ ಜಿ.ಎನ್. ಸುಗುಣ, ರೋಟರಿ ಕ್ಲಬ್ ಹಾಸನ್ ಮಿಡ್ ಟೌನ್ ಅಧ್ಯಕ್ಷ ಸಿದ್ದೇಶ್ವರ, ಕಾರ್ಯದರ್ಶಿ ಅರುಣ್ ಮೇಗೌಡ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ನ ಕಾರ್ಯದರ್ಶಿ ಕೆ.ಎಸ್. ಯೋಗೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಪ್ರತಿದಿನದ ಕಾನೂನು ಸುದ್ದಿಗಳ ಅಪ್ಡೇಟ್ಗಾಗಿ ಕೆಳಗಿನ ಲಿಂಕ್ ಮೂಲಕ WhatsApp ಗ್ರೂಪ್ಗೆ ಸೇರಿ.
Join ಆಗಲು ಈ ಕೆಳಗೆ ಕ್ಲಿಕ್ ಮಾಡಿ