ನವದೆಹಲಿ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಮೇಲೆ ಶೂ ಎಸೆಯಲು ಯತ್ನಿಸಿದ ಗಂಭೀರ ದುರ್ನಡತೆಗಾಗಿ ದೆಹಲಿ ಮೂಲದ ವಕೀಲರೊಬ್ಬರ ವಕಾಲತ್ತು ಪರವಾನಗಿಯನ್ನು ಭಾರತೀಯ ಬಾರ್ ಕೌನ್ಸಿಲ್ (ಬಿಸಿಐ) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಅಕ್ಟೋಬರ್ 6, 2025 ರಂದು ಸುಪ್ರೀಂ ಕೋರ್ಟ್ನ ನ್ಯಾಯಾಲಯ ಸಂಖ್ಯೆ 1 ರಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಕೀಲರ ಈ ನಡವಳಿಕೆಯು ನ್ಯಾಯಾಂಗದ ಘನತೆಗೆ ದೊಡ್ಡ ಹೊಡೆತ ಎಂದು ಬಿಸಿಐ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಬಿಸಿಐ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಹೊರಡಿಸಿರುವ ಆದೇಶದ ಪ್ರಕಾರ, ವಕೀಲ ರಾಕೇಶ್ ಕಿಶೋರ್ (ನೋಂದಣಿ ಸಂಖ್ಯೆ: ಡಿ/1647/2009) ಅವರು ಅಕ್ಟೋಬರ್ 6 ರಂದು ಬೆಳಗ್ಗೆ ಸುಮಾರು 11:35ಕ್ಕೆ, ಸುಪ್ರೀಂ ಕೋರ್ಟ್ನ ಮೊದಲನೇ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಕಲಾಪ ನಡೆಯುತ್ತಿದ್ದಾಗ ತಮ್ಮ ಕಾಲಿನಲ್ಲಿದ್ದ ಸ್ಪೋರ್ಟ್ಸ್ ಶೂಗಳನ್ನು ತೆಗೆದು ಪೀಠದತ್ತ ಎಸೆಯಲು ಪ್ರಯತ್ನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಬಾರ್ ಕೌನ್ಸಿಲ್, ವಕೀಲ ರಾಕೇಶ್ ಕಿಶೋರ್ ಅವರ ಈ ಕೃತ್ಯವು ವಕೀಲರ ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರದ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ವಕೀಲರ ಕಾಯ್ದೆ, 1961 ಮತ್ತು ಭಾರತೀಯ ಬಾರ್ ಕೌನ್ಸಿಲ್ನ ವೃತ್ತಿಪರ ನಡವಳಿಕೆ ನಿಯಮಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬಾರ್ ಕೌನ್ಸಿಲ್ನ ಆದೇಶದಲ್ಲೇನಿದೆ?
ಬಿಸಿಐ ತನ್ನ ಆದೇಶದಲ್ಲಿ, ರಾಕೇಶ್ ಕಿಶೋರ್ ಅವರನ್ನು ತಕ್ಷಣದಿಂದಲೇ ವಕೀಲ ವೃತ್ತಿಯಿಂದ ಅಮಾನತುಗೊಳಿಸಿದೆ. ಈ ಅಮಾನತು ಅವಧಿಯಲ್ಲಿ ಅವರು ಭಾರತದ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ವಕೀಲರಾಗಿ ಕಾರ್ಯನಿರ್ವಹಿಸುವಂತಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಹ ಬಿಸಿಐ ನಿರ್ಧರಿಸಿದೆ.
ಈ ಆದೇಶದ ಕುರಿತು 15 ದಿನಗಳೊಳಗೆ ವಿವರಣೆ ನೀಡುವಂತೆ ರಾಕೇಶ್ ಕಿಶೋರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. "ಈ ಅಮಾನತು ಕ್ರಮವನ್ನು ಏಕೆ ಮುಂದುವರಿಸಬಾರದು" ಎಂದು ಕಾರಣ ಕೇಳಲಾಗಿದೆ.
ದೆಹಲಿ ಬಾರ್ ಕೌನ್ಸಿಲ್ಗೆ ಈ ಕೂಡಲೇ ತನ್ನ ವಕೀಲರ ಪಟ್ಟಿಯಿಂದ ರಾಕೇಶ್ ಕಿಶೋರ್ ಅವರ ಹೆಸರನ್ನು ಅಮಾನತಿನಲ್ಲಿಡಲು ಮತ್ತು ಈ ಮಾಹಿತಿಯನ್ನು ದೆಹಲಿಯ ಎಲ್ಲಾ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳಿಗೆ ತಿಳಿಸಲು ಬಿಸಿಐ ನಿರ್ದೇಶನ ನೀಡಿದೆ. ಇದಲ್ಲದೆ, ಸುಪ್ರೀಂ ಕೋರ್ಟ್, ಎಲ್ಲಾ ಹೈಕೋರ್ಟ್ಗಳು ಮತ್ತು ಜಿಲ್ಲಾ ನ್ಯಾಯಾಲಯಗಳ ರಿಜಿಸ್ಟ್ರಾರ್ಗಳಿಗೂ ಈ ಆದೇಶವನ್ನು ತಲುಪಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಈ ಆದೇಶದ ಪರಿಣಾಮವಾಗಿ, ರಾಕೇಶ್ ಕಿಶೋರ್ ಅವರಿಗೆ ವಕೀಲರಾಗಿ ನೀಡಲಾಗಿದ್ದ ಎಲ್ಲಾ ಗುರುತಿನ ಚೀಟಿ, ಪ್ರವೇಶ ಪಾಸ್ಗಳು ನಿಷ್ಕ್ರಿಯಗೊಳ್ಳಲಿವೆ.