ಹಾಸನ: ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನ್ಯಾಯಾಂಗದ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಸಲ್ಲಿಸಲು ಮುಂದಾದ ಮನವಿಯನ್ನು ಸ್ವೀಕರಿಸಲು ಜಿಲ್ಲಾಧಿಕಾರಿ (ಡಿಸಿ) ಲತಾಕುಮಾರಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ, ಹಾಸನ ಜಿಲ್ಲಾ ವಕೀಲರ ಸಂಘವು ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿತು. ಗುರುವಾರ ನೂರಾರು ವಕೀಲರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸುವ ಮೂಲಕ ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಜ್ಞಾನಪ್ರಕಾಶ ಸ್ವಾಮೀಜಿ ನೀಡಿದ ಹೇಳಿಕೆಯನ್ನು ಖಂಡಿಸಿ, ವಕೀಲರ ಸಂಘವು ಬುಧವಾರ ಪ್ರತಿಭಟನೆ ನಡೆಸಿತ್ತು. ಇದರ ಭಾಗವಾಗಿ ಹಾಸನದಲ್ಲಿಯೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ವಕೀಲರು ತೆರಳಿದ್ದರು. ಆದರೆ, ಕಚೇರಿಯಲ್ಲಿಯೇ ಇದ್ದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಮನವಿ ಸ್ವೀಕರಿಸಲು ಆಗಮಿಸಲಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ವಕೀಲರು ಅಂದೇ ರಸ್ತೆ ತಡೆದು ಪ್ರತಿಭಟಿಸಿದ್ದರು. ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ, ಗುರುವಾರ ಪ್ರತಿಭಟನೆಯನ್ನು ತೀವ್ರಗೊಳಿಸಲಾಯಿತು.
ಜಿಲ್ಲಾ ನ್ಯಾಯಾಲಯದ ಆವರಣದಿಂದ ಎನ್.ಆರ್. ವೃತ್ತದವರೆಗೆ ಮೆರವಣಿಗೆ ನಡೆಸಿದ ವಕೀಲರು, ಬಳಿಕ ಮಾನವ ಸರಪಳಿ ರಚಿಸಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ, "ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದ್ದರೂ ಮನವಿ ಸ್ವೀಕರಿಸಲು ಬಾರದೆ ಉದ್ಧಟತನ ತೋರಿದ್ದಾರೆ. ನಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ನಿರ್ಲಕ್ಷಿಸಿದ್ದು, ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಅಥವಾ ವರ್ಗಾವಣೆಯಾಗಬೇಕು. ಅವರು ಜಿಲ್ಲೆಯಿಂದ ನಿರ್ಗಮಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ರಾಜ್ಯ ಬಾರ್ ಕೌನ್ಸಿಲ್, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹೊಂಬೇಶ್ ಮಾತನಾಡಿ, "ಜಿಲ್ಲಾಧಿಕಾರಿ ಕೇಂದ್ರ ಸ್ಥಾನದಲ್ಲಿದ್ದಾಗ ಅವರೇ ಮನವಿ ಸ್ವೀಕರಿಸಬೇಕು. ಆದರೆ, ಅವರು ನಿಯಮ ಉಲ್ಲಂಘಿಸಿದ್ದಾರೆ. ಈ ವರ್ತನೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲಾಗುವುದು ಮತ್ತು ಹೈಕೋರ್ಟ್ ಮೊರೆ ಹೋಗಲೂ ನಿರ್ಧರಿಸಿದ್ದೇವೆ" ಎಂದು ಹೇಳಿದರು.
ಪ್ರತಿಭಟನೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು, ಸಾರ್ವಜನಿಕರು ತೊಂದರೆ ಅನುಭವಿಸಿದರು. ಕೆಲವು ಸಾರ್ವಜನಿಕರು ವಕೀಲರ ರಸ್ತೆ ತಡೆ ಕ್ರಮವನ್ನು ಪ್ರಶ್ನಿಸಿದ್ದು, ಮಾತಿನ ಚಕಮಕಿಗೂ ಕಾರಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರತಿದಿನದ ಕಾನೂನು ಸುದ್ದಿಗಳ ಅಪ್ಡೇಟ್ಗಾಗಿ ಕೆಳಗಿನ ಲಿಂಕ್ ಮೂಲಕ WhatsApp ಗ್ರೂಪ್ಗೆ ಸೇರಿ.
Join ಆಗಲು ಈ ಕೆಳಗೆ ಕ್ಲಿಕ್ ಮಾಡಿ