ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ (ಪೊಕ್ಸೊ) ಪ್ರಕರಣದ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ಸಂತ್ರಸ್ತೆಯ ತಾಯಿಯಿಂದಲೇ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿರುವ ದೇವನಹಳ್ಳಿ ಠಾಣೆಯ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಜಗದೇವಿ ಭೀಮಾಶಂಕರ್ ಸಲೋಟಗಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸ್ಐ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ 27ರಂದು ವಜಾಗೊಳಿಸಿದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು, ಆರೋಪಿಯ ಕೃತ್ಯವನ್ನು "ಅತ್ಯಂತ ಅಮಾನವೀಯ ಮತ್ತು ಕ್ಷಮಿಸಲಾಗದ" ಎಂದು ಕಟುವಾಗಿ ಟೀಕಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ದೇವನಹಳ್ಳಿ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು, ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಜಾನ್ಸನ್ ಎಂಬ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಅನ್ವಯ, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಜಗದೇವಿ, ತನಿಖೆಯ ಪ್ರತಿಯೊಂದು ಹಂತದಲ್ಲೂ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಪ್ರಕರಣದ ಆರೋಪಿ ಜಾನ್ಸನ್ನನ್ನು ಬಂಧಿಸಿ ಕರೆತರಲು ಕಾರು ಬಾಡಿಗೆ ಮತ್ತು ಇತರೆ ಖರ್ಚುಗಳಿಗಾಗಿ ಪಿಎಸ್ಐ, ಸಂತ್ರಸ್ತೆಯ ತಾಯಿಯಿಂದ 25,000 ರೂ. ಪಡೆದಿದ್ದರು. ತದನಂತರ, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 75,000 ರೂ.ಗೆ ಒಪ್ಪಿಕೊಂಡು, ಮುಂಗಡವಾಗಿ 5,000 ರೂ. ಪಡೆದಿದ್ದರು.
ಲೋಕಾಯುಕ್ತ ಬಲೆಗೆ ಬಿದ್ದ ಸಹೋದ್ಯೋಗಿ
ಬಾಕಿ ಉಳಿದ 70,000 ರೂ. ಹಣವನ್ನು ಠಾಣೆಯ ಬರಹಗಾರ (ರೈಟರ್) ಕಾನ್ಸ್ಟೇಬಲ್ ಅಮರೇಶ್ ಅಥವಾ ಮತ್ತೊಬ್ಬ ಕಾನ್ಸ್ಟೇಬಲ್ಗೆ ತಲುಪಿಸುವಂತೆ ಸೆಪ್ಟೆಂಬರ್ 2ರಂದು ಪಿಎಸ್ಐ ದೂರುದಾರರಿಗೆ ಒತ್ತಡ ಹೇರಿದ್ದರು. ಅಧಿಕಾರಿಯ ಲಂಚದ ಬೇಡಿಕೆಯಿಂದ ಬೇಸತ್ತ ಸಂತ್ರಸ್ತೆಯ ತಾಯಿ, ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಸೆಪ್ಟೆಂಬರ್ 3ರಂದು ಪಿಎಸ್ಐ ಜಗದೇವಿ ಪರವಾಗಿ 50,000 ರೂ. ಲಂಚ ಸ್ವೀಕರಿಸುತ್ತಿದ್ದ ಠಾಣಾ ಬರಹಗಾರ ಅಮರೇಶ್ನನ್ನು ಬಲೆಗೆ ಬೀಳಿಸಿ ಬಂಧಿಸಿದರು. ಈ ವೇಳೆ, ಪ್ರಮುಖ ಆರೋಪಿ ಪಿಎಸ್ಐ ಜಗದೇವಿ ಮತ್ತು ಮತ್ತೊಬ್ಬ ಕಾನ್ಸ್ಟೇಬಲ್ ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದರು.
ಕಳೆದ 27 ದಿನಗಳಿಂದ ತಲೆಮರೆಸಿಕೊಂಡಿರುವ ಪಿಎಸ್ಐ ಜಗದೇವಿ, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಕಟು ನುಡಿ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, "ಪೊಕ್ಸೊದಂತಹ ಸೂಕ್ಷ್ಮ ಪ್ರಕರಣದ ತನಿಖೆ ನಡೆಸಲು ಸಂತ್ರಸ್ತೆಯ ತಾಯಿಯಿಂದಲೇ ಲಂಚ ಪಡೆದು, ಮತ್ತಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವ ಸರ್ಕಾರಿ ಅಧಿಕಾರಿಯಾದ ಆರೋಪಿ ಪಿಎಸ್ಐ ಅವರ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ಕ್ಷಮಿಸಲು ಸಾಧ್ಯವಾಗದ ಕೃತ್ಯ. ಇದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.