ಕಾಣೆಯಾದ ವ್ಯಕ್ತಿಯೊಬ್ಬನ ಪತ್ತೆಗಾಗಿ ನಡೆಯುತ್ತಿರುವ ಪೊಲೀಸ್ ತನಿಖೆಗೆ, ಆ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಲಾದ ಸ್ಥಳದ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ನಿರ್ದೇಶನ ನೀಡಿದೆ. ಆಧಾರ್ ಕಾಯ್ದೆಯಡಿ ಗೌಪ್ಯತೆ ಮತ್ತು ತನಿಖೆಯ ಅಗತ್ಯತೆಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ವಿವರಿಸಿರುವ ನ್ಯಾಯಾಲಯ, ಪೊಲೀಸ್ ತನಿಖೆಗಾಗಿ ಆಧಾರ್ ಮಾಹಿತಿ ಹಂಚಿಕೊಳ್ಳುವ ಕುರಿತು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರಾದ ಹುಬ್ಬಳ್ಳಿಯ ನಿವಾಸಿ ಶ್ರೀ ಕೃಷ್ಣಮೂರ್ತಿ ಅವರ ಮಗ ವಿಜಯ್ ಕೃಷ್ಣಮೂರ್ತಿ, 2019ರಲ್ಲಿ ಕಾಣೆಯಾಗಿದ್ದರು. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆ ನಡೆಯುತ್ತಿದ್ದಂತೆಯೇ, ಕಾಣೆಯಾದ ಮಗನ ಆಧಾರ್ ಕಾರ್ಡ್ ಎಲ್ಲೋ ಬಳಕೆಯಾಗುತ್ತಿರುವ ಬಗ್ಗೆ ಅರ್ಜಿದಾರರಿಗೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ಪೊಲೀಸರು ಯುಐಡಿಎಐ ಅನ್ನು ಸಂಪರ್ಕಿಸಿ, ಆಧಾರ್ ದೃಢೀಕರಣದ ಇತಿಹಾಸವನ್ನು (Authentication History) ಕೇಳಿದ್ದರು. ಆದರೆ, ಆಧಾರ್ ಮಾಹಿತಿಯು ಗೌಪ್ಯವಾಗಿದ್ದು, ಖಾಸಗಿತನದ ಹಕ್ಕಿನ ಅಡಿಯಲ್ಲಿ ಬರುವುದರಿಂದ ಅದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಯುಐಡಿಎಐ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ
ಅರ್ಜಿದಾರರ ಪರ ವಕೀಲರು ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಆಧಾರ್ ಬಳಕೆಯಾದ ಸ್ಥಳದ ಮಾಹಿತಿ ಅತ್ಯಂತ ನಿರ್ಣಾಯಕವಾಗಿದೆ. ತನಿಖಾ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಈ ಮಾಹಿತಿ ಅಗತ್ಯವಿದ್ದು, ಇದನ್ನು ಒದಗಿಸಲು ಯುಐಡಿಎಐಗೆ ನಿರ್ದೇಶಿಸಬೇಕು ಎಂದು ವಾದಿಸಿದರು.
ಯುಐಡಿಎಐ ಪರ ವಕೀಲರು ಆಧಾರ್ ಮಾಹಿತಿಯು ಅತ್ಯಂತ ಗೌಪ್ಯವಾಗಿದ್ದು, 'ಪುಟ್ಟಸ್ವಾಮಿ ಪ್ರಕರಣ'ದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಖಾಸಗಿತನದ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ತನಿಖಾಧಿಕಾರಿಗಳಿಗೂ ಈ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಹೈಕೋರ್ಟ್ ವಿಶ್ಲೇಷಣೆ ಮತ್ತು ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಆಧಾರ್ ಕಾಯ್ದೆ, 2016ರ ಸೆಕ್ಷನ್ 29 ಮತ್ತು 33 ಅನ್ನು ಕೂಲಂಕಷವಾಗಿ ವಿಶ್ಲೇಷಿಸಿತು. ಸೆಕ್ಷನ್ 29ರ ಅಡಿ 'ಕೋರ್ ಬಯೋಮೆಟ್ರಿಕ್ ಮಾಹಿತಿ' (ಬೆರಳಚ್ಚು, ಕಣ್ಣಿನ ಸ್ಕ್ಯಾನ್) ಹಂಚಿಕೊಳ್ಳಲು ಸಂಪೂರ್ಣ ನಿರ್ಬಂಧವಿದೆ. ಆದರೆ, 'ಗುರುತಿನ ಮಾಹಿತಿ'ಯನ್ನು (Identity Information) ಕೆಲವು ಸಂದರ್ಭಗಳಲ್ಲಿ ಹಂಚಿಕೊಳ್ಳಬಹುದು ಎಂದು ಪೀಠವು ಸ್ಪಷ್ಟಪಡಿಸಿತು.
"ಆಧಾರ್ ಕಾಯ್ದೆಯ ಸೆಕ್ಷನ್ 33ರ ಪ್ರಕಾರ, ಹೈಕೋರ್ಟ್ಗಿಂತ ಕಡಿಮೆಯಿಲ್ಲದ ನ್ಯಾಯಾಲಯದ ಆದೇಶದ ಮೇರೆಗೆ ಗುರುತಿನ ಮಾಹಿತಿ ಅಥವಾ ದೃಢೀಕರಣ ದಾಖಲೆಗಳನ್ನು ಬಹಿರಂಗಪಡಿಸಲು ಯಾವುದೇ ನಿರ್ಬಂಧ ಅನ್ವಯಿಸುವುದಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಪ್ರಕರಣದಲ್ಲಿ, ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ನಡೆಯುತ್ತಿರುವ ತನಿಖೆಗೆ ಆಧಾರ್ ಬಳಕೆಯಾದ ಸ್ಥಳದ ಮಾಹಿತಿ ಅತ್ಯಗತ್ಯವಾಗಿದೆ. ಈ ಮಾಹಿತಿ ಲಭ್ಯವಾಗದಿದ್ದರೆ ತನಿಖೆ ಮುಂದೆ ಸಾಗಲು ಸಾಧ್ಯವಿಲ್ಲ. ಆದ್ದರಿಂದ, ತನಿಖೆಯ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ನೀಡುವುದು ನ್ಯಾಯಸಮ್ಮತ ಎಂದು ಪೀಠವು ತೀರ್ಮಾನಿಸಿತು.
ಈ ಹಿನ್ನೆಲೆಯಲ್ಲಿ, ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಈ ಕೆಳಗಿನಂತೆ ಆದೇಶಿಸಿದೆ:
1. ಯುಐಡಿಎಐ, ಕಾಣೆಯಾದ ವಿಜಯ್ ಕೃಷ್ಣಮೂರ್ತಿ ಅವರ ಆಧಾರ್ ಕಾರ್ಡ್ ಬಳಕೆಯಾದ ಸ್ಥಳದ ವಿವರಗಳನ್ನು (Location Details) ಮಾತ್ರ ಈ ಆದೇಶ ಸ್ವೀಕರಿಸಿದ 15 ದಿನಗಳಲ್ಲಿ ತನಿಖಾಧಿಕಾರಿಗೆ ನೀಡಬೇಕು.
2. ಸ್ಥಳದ ವಿವರಗಳನ್ನು ಹೊರತುಪಡಿಸಿ, ಬೇರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು.
3. ತನಿಖಾಧಿಕಾರಿಯು ಈ ಮಾಹಿತಿಯನ್ನು ತನಿಖೆಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಮತ್ತು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು.
ಪ್ರಕರಣದ ಶೀರ್ಷಿಕೆ: ಶ್ರೀ ಕೃಷ್ಣಮೂರ್ತಿ ವಿರುದ್ಧ ಯುಐಡಿಎಐ ನಿರ್ದೇಶಕರು ಮತ್ತು ಇತರರು
ಪ್ರಕರಣ ಸಂಖ್ಯೆ: ರಿಟ್ ಅರ್ಜಿ ಸಂಖ್ಯೆ 105596/2025