ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಮೂಲ ಚೆಕ್ ಕಳೆದುಹೋದರೆ, ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ ಅದರ ಜೆರಾಕ್ಸ್ ಪ್ರತಿಯನ್ನು ದ್ವಿತೀಯ ಸಾಕ್ಷ್ಯವಾಗಿ ಪರಿಗಣಿಸಲು ಅವಕಾಶವಿದೆ ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಮಹತ್ವದ ತೀರ್ಪು ನೀಡಿದೆ.
ಮೂಲ ಚೆಕ್ ಅನ್ನು ನ್ಯಾಯಾಲಯ ಪರಿಶೀಲಿಸಿ, ಅದನ್ನು ಹಿಂದಿರುಗಿಸಿದ ಬಗ್ಗೆ ದಾಖಲೆಗಳಲ್ಲಿ ನಮೂದಾಗಿದ್ದರೆ, ಆ ಚೆಕ್ನ ಜೆರಾಕ್ಸ್ ಪ್ರತಿಯನ್ನು ಸಾಕ್ಷ್ಯವಾಗಿ ಸ್ವೀಕರಿಸಲು ನಿರಾಕರಿಸುವುದು ನ್ಯಾಯದಾನದ ದೃಷ್ಟಿಯಿಂದ ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣ: ಮೊಹಮ್ಮದ್ ಇಕ್ಬಾಲ್ ಮತ್ತು ಎಸ್. ಮನೋನ್ಮಣಿಯನ್ ನಡುವಣ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು. 5.50 ಲಕ್ಷ ರೂಪಾಯಿ ಸಾಲಕ್ಕೆ ಪ್ರತಿಯಾಗಿ ನೀಡಲಾಗಿದ್ದ ಚೆಕ್ ಅಮಾನ್ಯಗೊಂಡಿದ್ದರಿಂದ, ಮೊಹಮ್ಮದ್ ಇಕ್ಬಾಲ್ ಅವರು ಪುದುಕೊಟ್ಟೈನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ಆರಂಭದಲ್ಲಿ ನ್ಯಾಯಾಲಯವು ಮೂಲ ಚೆಕ್ ಅನ್ನು ಪರಿಶೀಲಿಸಿ, ಅದರ ಜೆರಾಕ್ಸ್ ಪ್ರತಿಯನ್ನು ಇರಿಸಿಕೊಂಡು ಮೂಲ ಪ್ರತಿಯನ್ನು ಅರ್ಜಿದಾರರಿಗೆ ಹಿಂದಿರುಗಿಸಿತ್ತು. ನಂತರದ ದಿನಗಳಲ್ಲಿ ಅರ್ಜಿದಾರರ ವಕೀಲರಿಂದ ಮೂಲ ಚೆಕ್ ಕಳೆದುಹೋದ ಕಾರಣ, ಜೆರಾಕ್ಸ್ ಪ್ರತಿಯನ್ನು ದ್ವಿತೀಯ ಸಾಕ್ಷ್ಯವಾಗಿ ಪರಿಗಣಿಸುವಂತೆ ಕೋರಿ ಅರ್ಜಿದಾರರು ಮನವಿ ಮಾಡಿದ್ದರು. ಆದರೆ ವಿಚಾರಣಾ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತ್ತು.
ವಾದ-ಪ್ರತಿವಾದ: ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ವಕೀಲರು, ಭಾರತೀಯ ಸಾಕ್ಷ್ಯ ಅಧಿನಿಯಮ, 1872ರ ಸೆಕ್ಷನ್ 63 ಮತ್ತು 65ರ ಅಡಿಯಲ್ಲಿ, ಮೂಲ ದಾಖಲೆ ಕಳೆದುಹೋದಾಗ ದ್ವಿತೀಯ ಸಾಕ್ಷ್ಯವನ್ನು ಪರಿಗಣಿಸಲು ಅವಕಾಶವಿದೆ ಎಂದು ವಾದಿಸಿದ್ದರು. ಆದರೆ, ಪ್ರತಿವಾದಿ ಪರ ವಕೀಲರು, ಮೂಲ ಚೆಕ್ ಇಲ್ಲದೆ ಜೆರಾಕ್ಸ್ ಪ್ರತಿಯನ್ನು ಸಾಕ್ಷ್ಯವಾಗಿ ಪರಿಗಣಿಸುವುದರಿಂದ ತಮ್ಮ ಕಕ್ಷಿದಾರರಿಗೆ ಅನ್ಯಾಯವಾಗುತ್ತದೆ ಮತ್ತು ಚೆಕ್ ಕಳೆದುಹೋಗಿರುವುದಕ್ಕೆ ಸೂಕ್ತ ಪುರಾವೆ ಇಲ್ಲ ಎಂದು ವಾದಿಸಿದ್ದರು.
ಹೈಕೋರ್ಟ್ ತೀರ್ಪು: ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠವು, ವಿಚಾರಣಾ ನ್ಯಾಯಾಲಯವು ಮೂಲ ಚೆಕ್ ಅನ್ನು ಪರಿಶೀಲಿಸಿ ಹಿಂದಿರುಗಿಸಿರುವುದನ್ನು ಸ್ವತಃ ದಾಖಲೆಯಲ್ಲಿ ನಮೂದಿಸಿದೆ. ಹೀಗಿರುವಾಗ, ಚೆಕ್ನ ಜೆರಾಕ್ಸ್ ಪ್ರತಿಯನ್ನು ಸಾಕ್ಷ್ಯವಾಗಿ ಸ್ವೀಕರಿಸಲು ನಿರಾಕರಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಭಾರತೀಯ ಸಾಕ್ಷ್ಯ ಅಧಿನಿಯಮದ ಅಡಿಯಲ್ಲಿ, ಮೂಲ ದಾಖಲೆ ಕಳೆದುಹೋದಾಗ ದ್ವಿತೀಯ ಸಾಕ್ಷ್ಯವನ್ನು ಸ್ವೀಕರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಚೆಕ್ನ ಜೆರಾಕ್ಸ್ ಪ್ರತಿಯನ್ನು ದ್ವಿತೀಯ ಸಾಕ್ಷ್ಯವಾಗಿ ಪರಿಗಣಿಸಿ, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.