ಸಮಾಜದಲ್ಲಿ ಪೊಲೀಸ್ ಇಲಾಖೆಯ ಗೌರವ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯ ಮತ್ತು ನಿಷ್ಠೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಈ ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪೊಲೀಸ್ ಅಧಿಕಾರಿಗಳು ನಾಗರಿಕರೊಂದಿಗೆ ವರ್ತಿಸುವ ರೀತಿ ಇಲಾಖೆಯ ಘನತೆಯನ್ನು ನಿರ್ಧರಿಸುತ್ತದೆ ಎಂದು ಸುತ್ತೋಲೆಯಲ್ಲಿ ಒತ್ತಿ ಹೇಳಲಾಗಿದೆ. "ಸಾರ್ವಜನಿಕರ ವಿಶ್ವಾಸವೇ ಪೊಲೀಸ್ ಇಲಾಖೆಯ ಅತ್ಯಂತ ಮೌಲ್ಯಯುತ ಆಸ್ತಿ" ಎಂಬುದನ್ನು ಪ್ರತಿಯೊಬ್ಬ ಸಿಬ್ಬಂದಿ ನೆನಪಿನಲ್ಲಿಡಬೇಕು ಎಂದು ಡಿಜಿಪಿ ತಿಳಿಸಿದ್ದಾರೆ. ಸಕಾರಾತ್ಮಕ ಮತ್ತು ವೃತ್ತಿಪರ ನಡವಳಿಕೆಯು ಸಾರ್ವಜನಿಕರಲ್ಲಿ ಇಲಾಖೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ಅಧಿಕಾರ ದುರುಪಯೋಗ, ದರ್ಪದ ವರ್ತನೆ ಅಥವಾ ಅನಗತ್ಯ ಬಲಪ್ರಯೋಗವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಈ ನಿಟ್ಟಿನಲ್ಲಿ, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಪಾಲಿಸಬೇಕಾದ 18 ಪ್ರಮುಖ ಮಾರ್ಗಸೂಚಿಗಳನ್ನು ಸುತ್ತೋಲೆಯಲ್ಲಿ ನೀಡಲಾಗಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ:
* ಸಮಾನತೆ ಮತ್ತು ಸೌಜನ್ಯ: ಪೊಲೀಸ್ ಠಾಣೆಗೆ ಬರುವ ವ್ಯಕ್ತಿಗಳ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ದೂರುಗಳನ್ನು ತಾಳ್ಮೆಯಿಂದ ಆಲಿಸಿ, ಒರಟು ಭಾಷೆ ಬಳಸದೆ ಸೌಜನ್ಯದಿಂದ ವರ್ತಿಸಬೇಕು.
* ಪಾರದರ್ಶಕತೆ ಮತ್ತು ಪ್ರಾಮಾಣಿಕತೆ: ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅಕ್ರಮ ಲಾಭ ಅಥವಾ ಸಹಾಯವನ್ನು ಸ್ವೀಕರಿಸಬಾರದು. ಸ್ಟೇಷನ್ ಹೌಸ್ ಡೈರಿ ಮತ್ತು ಕೇಸ್ ಫೈಲ್ಗಳನ್ನು ನಿಖರವಾಗಿ ನಿರ್ವಹಿಸಬೇಕು.
* ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ: ಸಂತ್ರಸ್ತರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿ ಹಾಗೂ ಸೂಕ್ಷ್ಮತೆಯಿಂದ ವರ್ತಿಸಬೇಕು. ಸಂಜೆ 6 ಗಂಟೆಯ ನಂತರ ಮಹಿಳೆಯರನ್ನು ವಿಚಾರಣೆಗೆ ಠಾಣೆಗೆ ಕರೆತರಬಾರದು. ಆರೋಪಿ ಮಹಿಳೆಯಾಗಿದ್ದಲ್ಲಿ, ಆಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಆಕೆಯ ಮನೆಯಲ್ಲಿಯೇ ವಿಚಾರಣೆ ನಡೆಸಬೇಕು ಮತ್ತು ಅವರನ್ನು ರಾಜ್ಯ ಗೃಹದಲ್ಲಿ (ಸ್ಟೇಟ್ ಹೋಮ್) ಇರಿಸಬೇಕು.
* ಶೂನ್ಯ ಎಫ್ಐಆರ್ (Zero FIR): ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಾಗ, ದೂರುದಾರರನ್ನು ಅಲೆದಾಡಿಸದೆ, ಶೂನ್ಯ ಎಫ್ಐಆರ್ ದಾಖಲಿಸಿ ನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಬೇಕು.
* ವೃತ್ತಿಪರತೆ: ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ನೀಟಾದ ಸಮವಸ್ತ್ರ ಅಥವಾ ಮಫ್ತಿ ಬಟ್ಟೆಗಳನ್ನು ಧರಿಸಬೇಕು. ಇದು ಅವರ ವ್ಯಕ್ತಿತ್ವ ಮತ್ತು ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ನಿಯಮಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಕಠಿಣ ಎಚ್ಚರಿಕೆ ನೀಡಲಾಗಿದೆ.
ಪ್ರತಿದಿನದ ಕಾನೂನು ಸಂಬಂಧಿಸಿದ ಸುದ್ದಿಗಳ ಅಪ್ಡೇಟ್ಗಾಗಿ ಕೆಳಗಿನ ಲಿಂಕ್ ಮೂಲಕ WhatsApp ಗ್ರೂಪ್ಗೆ ಸೇರಿ.
Join ಆಗಲು ಈ ಕೆಳಗೆ ಕ್ಲಿಕ್ ಮಾಡಿ