ಡೇಟಿಂಗ್ ಅಪ್ಲಿಕೇಶನ್ನಲ್ಲಿ ಪರಿಚಯವಾದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ನಂತರ ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಯುವಕನಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಪರಸ್ಪರ ಒಪ್ಪಿಗೆಯಿಂದ ಕೂಡಿದ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಯುವಕನ ವಿರುದ್ಧದ ಎಫ್ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಮತ್ತು ದೂರುದಾರ ಯುವತಿ 'ಬಂಬಲ್' ಎಂಬ ಡೇಟಿಂಗ್ ಆ್ಯಪ್ ಮೂಲಕ ಸುಮಾರು ಒಂದು ವರ್ಷದ ಹಿಂದೆ ಪರಿಚಯವಾಗಿದ್ದರು. ನಂತರ ಇನ್ಸ್ಟಾಗ್ರಾಂನಲ್ಲಿ ಮಾತುಕತೆ ಮುಂದುವರಿಸಿ, ಆಗಸ್ಟ್ 11, 2024 ರಂದು ಖುದ್ದಾಗಿ ಭೇಟಿಯಾಗಲು ನಿರ್ಧರಿಸಿದ್ದರು. ಇಬ್ಬರೂ ಒಟ್ಟಿಗೆ ಊಟ ಮಾಡಿ, ನಂತರ ಓಯೋ ಹೋಟೆಲ್ವೊಂದರಲ್ಲಿ ಕೊಠಡಿ ಕಾಯ್ದಿರಿಸಿ ದೈಹಿಕವಾಗಿ ಒಂದಾಗಿದ್ದರು.
ಆದರೆ, ಎರಡು ದಿನಗಳ ನಂತರ, ಅಂದರೆ ಆಗಸ್ಟ್ 13, 2024 ರಂದು, ಯುವತಿಯು ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೈಹಿಕ ಸಂಪರ್ಕದ ಮಧ್ಯದಲ್ಲಿ ತಾನು ಒಪ್ಪಿಗೆಯನ್ನು ಹಿಂಪಡೆದರೂ, ಯುವಕ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 64ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಯುವಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು.
ವಾದ-ಪ್ರತಿವಾದಗಳು:
ಅರ್ಜಿದಾರರ ಪರ ವಕೀಲರು "ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಪರಸ್ಪರ ಒಪ್ಪಿಗೆಯಿಂದ ಕೂಡಿತ್ತು. ಇಬ್ಬರ ನಡುವಿನ ಇನ್ಸ್ಟಾಗ್ರಾಂ ಚಾಟ್ಗಳು ಮತ್ತು ಫೋಟೋಗಳು ಇದನ್ನು ಸಾಬೀತುಪಡಿಸುತ್ತವೆ. ಆದರೆ ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದ್ದಾರೆ" ಎಂದು ವಾದಿಸಿದರು.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು "ಇದು ಲೈಂಗಿಕ ದೌರ್ಜನ್ಯವೇ ಹೊರತು, ಸಮ್ಮತಿಯ ಸಂಪರ್ಕವಲ್ಲ. ಒಪ್ಪಿಗೆಯ ಪ್ರಶ್ನೆಯು ವಿಚಾರಣೆಯ ವಿಷಯವಾಗಿದ್ದು, ಅರ್ಜಿಯನ್ನು ವಜಾಗೊಳಿಸಬೇಕು" ಎಂದು ಪ್ರತಿಪಾದಿಸಿದರು.
ನ್ಯಾಯಾಲಯದ ವಿಶ್ಲೇಷಣೆ ಮತ್ತು ತೀರ್ಪು:
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಅರ್ಜಿದಾರರು ಸಲ್ಲಿಸಿದ್ದ ಇಬ್ಬರ ನಡುವಿನ ಚಾಟ್ಗಳನ್ನು ಪರಿಶೀಲಿಸಿತು. "ಈ ಚಾಟ್ಗಳು ಇಬ್ಬರ ನಡುವಿನ ಕೃತ್ಯಗಳು ಪರಸ್ಪರ ಸಮ್ಮತಿಯಿಂದ ನಡೆದಿದ್ದವು ಎಂಬುದನ್ನು ಸೂಚಿಸುತ್ತವೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, "ಪರಸ್ಪರ ಇಚ್ಛೆಯಿಂದ ಪ್ರಾರಂಭವಾದ ಸಂಬಂಧವು ನಿರಾಸೆಯಲ್ಲಿ ಕೊನೆಗೊಂಡರೆ, ಅದನ್ನು ಕ್ರಿಮಿನಲ್ ಅಪರಾಧವಾಗಿ ಪರಿವರ್ತಿಸಲಾಗುವುದಿಲ್ಲ. ಅಂತಹ ಪ್ರಕರಣದಲ್ಲಿ ವಿಚಾರಣೆಯನ್ನು ಮುಂದುವರಿಸಿದರೆ, ಅದು ಕಾನೂನಿನ ದುರ್ಬಳಕೆ ಮತ್ತು ನ್ಯಾಯದಾನದ ವೈಫಲ್ಯಕ್ಕೆ ಕಾರಣವಾಗುತ್ತದೆ" ಎಂದು ಸ್ಪಷ್ಟಪಡಿಸಿತು.
ದೂರುದಾರರು ಮತ್ತು ಅರ್ಜಿದಾರರು ಪ್ರಜ್ಞಾಪೂರ್ವಕವಾಗಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ ನ್ಯಾಯಾಲಯ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸಲು ಯಾವುದೇ ಆಧಾರಗಳಿಲ್ಲ ಎಂದು ತೀರ್ಮಾನಿಸಿ, ಅರ್ಜಿಯನ್ನು ಪುರಸ್ಕರಿಸಿತು.
ಪ್ರಕರಣದ ಸಂಖ್ಯೆ: ರಿಟ್ ಅರ್ಜಿ ಸಂಖ್ಯೆ 31144/2024
ನ್ಯಾಯಾಲಯ: ಕರ್ನಾಟಕ ಹೈಕೋರ್ಟ್, ಬೆಂಗಳೂರು
ನ್ಯಾಯಪೀಠ: ನ್ಯಾಯಮೂರ್ತಿ ಎಂ. ನಾಗಪ್ರಸನ್ನ
ತೀರ್ಪಿನ ದಿನಾಂಕ: ಅಕ್ಟೋಬರ್ 25, 2025
ಪ್ರತಿದಿನದ ಕಾನೂನು ಸುದ್ದಿಗಳ ಅಪ್ಡೇಟ್ಗಾಗಿ ಕೆಳಗಿನ ಲಿಂಕ್ ಮೂಲಕ WhatsApp ಗ್ರೂಪ್ಗೆ ಸೇರಿ.
Join ಆಗಲು ಈ ಕೆಳಗೆ ಕ್ಲಿಕ್ ಮಾಡಿ